ತತ್ವಪದ: ಏನ ಮಾಡಲೋ ಶಿವನೇ
ಶ್ರೀ ಶoಕರ ನಮನ
ವೀಣೆ ತoತಿ ಮಾಡಿ ನುಡಿಸು
ಅಮ್ಮ
ಶಿವ ಪoಚಭೂತಾಕ್ಷರಿ
ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಮಧ್ಯಕಣಿವೆಯಲ್ಲಿ ಕನ್ನಡದ ಕಂಪನ್ನು ಸೂಸುತ್ತಿರುವ ಗುರು ಕೃಷ್ಣಮೂರ್ತಿಯವರ ಒಂದು ಕಿರು-ಪರಿಚಯ ಇಂತಿದೆ.
ಕನ್ನಡ ಶಿಕ್ಷಕಿಯೊಬ್ಬರ (ಅಜ್ಜಿ)ಆಶ್ರಯದಲ್ಲಿ, ಕನ್ನಡ ಸ್ನೇಹಿ ವಾತಾವರಣ ತುಂಬಿದ ಮನೆಯಲ್ಲಿ ಬೆಳೆದು ಸಹಜವಾಗಿಯೇ ಕನ್ನಡ ನಡೆ, ನುಡಿ, ಸಾಹಿತ್ಯದಲ್ಲಿ ಒಲವು. ಗ್ರಾಮಾ೦ತರ ಪ್ರದೇಶವಾದ ಮಾಗಡಿಯಲ್ಲಿ ಏಳನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ, ಶಾಲಾ ಕಾಲೇಜುಗಳಲ್ಲಿ ಪ್ರಬಂಧ, ಚರ್ಚೆ, ಕಥೆ, ಕವನ ಬರೆಯುವಿಕೆಯ ಮೂಲಕ ಕನ್ನಡ ಸಾಹಿತ್ಯದ ಬಗೆಗಿನ ಅಭಿರುಚಿಯನ್ನು ಮುಂದುವರೆಸಿದರು. ಸುಮಾರು 5 ವರ್ಷಗಳ ಕಾಲ ತಾವು ಕಾರ್ಯ ನಿರ್ವಹಿಸುತ್ತಿದ್ದ ಕಂಪನಿಗಳ ಮೂಲಕ ಕರ್ನಾಟಕದ ಹಳ್ಳಿಯ ಶಾಲಾ ಮಕ್ಕಳಿಗೆ ಕನ್ನಡ ಭಾಷೆ ಹಾಗೂ ಕನ್ನಡದಲ್ಲಿ ವಿಜ್ಞಾನವನ್ನು ಬೋಧಿಸಿದ ಹೆಗ್ಗಳಿಕೆ ಇವರದ್ದು.
ಕಥೆ, ಕವನ, ದೇವರನಾಮಗಳನ್ನು ರಚಿಸುವ ಹವ್ಯಾಸವನ್ನು ಹೊಂದಿರುವ ಇವರ. ನಮ್ಮ ಭೂಮಿ, ನನ್ನ ಮಗಳಿಗಾಗಿ ಒಂದು ಪ್ರಾರ್ಥನೆ, ಭರವಸೆಯ ಬೆಳಕು, ನನ್ನ ಅಜ್ಜಿ ಶಿಕ್ಷಕಿ, ಹೀಗೊಂದು ಬೇಸಿಗೆ ಇವು ಮುದ್ರಣದಲ್ಲಿರುವ ಕವನಗಳಾದರೆ ವೀಣೆ ತಂತಿ ಮಾಡಿ ನುಡಿಸು, ಜ್ಞಾನ ವೃಷ್ಟಿಯ ಅನುಗ್ರಹಿಸೋ ದೇವ, ಏನಾ ಮಾಡಲೋ ಶಿವನೇ (ತತ್ವ ಪದ), ಅಮ್ಮ ಹಾಗೂ ಸ್ಯಾನ್ ಹ್ವಾಕೀನ್ ಕನ್ನಡ ಸಂಘದ ಶೀರ್ಷಿಕೆ ಗೀತೆಯಾದ “ಕನ್ನಡ ತಂಬೆಲರು” ಧ್ವನಿ ಮುದ್ರಣಗೊಂಡು ಬಿಡುಗಡೆಯಾದ ಕೃತಿಗಳಾಗಿವೆ.
ಅಮೇರಿಕ ದೇಶದಲ್ಲಿನ ಕನ್ನಡ ಕೂಟಗಳ ಕಾರ್ಯಕ್ರಮಗಳ ನಿರ್ಮಾಣ, ನಿರ್ದೇಶನದ ಮೂಲಕ ಕನ್ನಡದ ಪರವಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಜ್ಞಾನ ಪೀಠ ವಿಜೇತರಿಗೆ ನಮನ ಎಂಬ ಸಂಗೀತ ಕಾರ್ಯಕ್ರಮ, ನನ್ನ ಅಜ್ಜಿ ಶಿಕ್ಷಕಿ ಎಂಬ ಮಕ್ಕಳ ನಾಟಕ, ನಿಸ್ಸಾರ್ ನಮನ, ಶ್ರೀಯುತ ಹೆಚ್. ಎಸ್. ವೆಂಕಟೇಶಮೂರ್ತಿ ಅವರ ಸಂದರ್ಶನ ಹಾಗೂ ಖ್ಯಾತ ಗಾಯಕಿ ನಂದಿನಿ ರಾವ್ ಗುಜ್ಜರ್ ಅವರೊಂದಿಗೆ ನಡೆಸಿದ ದಾಸ – ಶರಣ ಸಾಹಿತ್ಯ ದೀಪ ಇವುಗಳು ಶ್ರೀಯುತರು ನಿರ್ದೇಶಿಸಿದ ಕಾರ್ಯಕ್ರಮಗಳಲ್ಲಿ ಒಂದಾಗಿವೆ. ಇವುಗಳಲ್ಲಿ ಹಲವಾರು ಕಾರ್ಯಕ್ರಮಗಳು ಅಮೇರಿಕಾದ ಕನ್ನಡ ಕೂಟಗಳ ಆಗರ (ಅಕ್ಕ) ಹಾಗೂ ನಾವು ವಿಶ್ವ ಕನ್ನಡಿಗರು (ನಾವಿಕ) ವೇದಿಕೆಗಳಲ್ಲಿ ಪ್ರದರ್ಶನಗೊ೦ಡಿವೆ.
ಇಷ್ಟೇ ಅಲ್ಲದೆ ಪುತ್ತೂರು ನರಸಿಂಹ ನಾಯಕ್, ಬಿ. ಕೆ. ಎಸ್. ವರ್ಮ, ಯಶವಂತ ಸರ್ದೇಶಪಾ೦ಡೆ, ಸ್ನೇಹಾ ಕಪ್ಪಣ್ಣ, ಪ್ರಣಯ ರಾಜ ಶ್ರೀನಾಥ್, ಬಿ. ಜಯಶ್ರೀ ಮೊದಲಾದ ಕನ್ನಡದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವವರ ಸಂದರ್ಶನಗಳನ್ನು ಕೈಗೊಂಡು ಅವರುಗಳ ಸಾಧನೆಯ ಬಗ್ಗೆ ಕ್ಯಾಲಿಫೋರ್ನಿಯಾದ ಕನ್ನಡಿಗರಿಗೆ ತಿಳಿಯಪಡಿಸಿದ್ದಾರೆ.
ಮೂರು ವರ್ಷಗಳ ಕಾಲ ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದ (ಕೆ.ಕೆ.ಎನ್.ಸಿ) ಪ್ರತಿಷ್ಠಿತ ವಾರ್ಷಿಕ “ಸ್ವರ್ಣಸೇತು” ಸಂಚಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುವ ಹಾಗೂ ೨೦೧೯ರ ಸಂಚಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುವ ಅವಕಾಶ ಇವರದಾಗಿತ್ತು.
ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಮಧ್ಯಕಣಿವೆಯಲ್ಲಿರುವ ಸ್ಯಾನ್ ಹ್ವಾಕೀನ್ ಕನ್ನಡ ಸಂಘದ 2021-22 ಹಾಗೂ 2022-23 ನೇ ಸಾಲಿನ ಅಧ್ಯಕ್ಷರಾಗಿ ಕನ್ನಡ ಭಾಷಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ರೂವಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಯುಗಾದಿ ಸಂಭ್ರಮ, ದೀಪಾವಳಿ, ಕನ್ನಡ ರಾಜ್ಯೋತ್ಸವ ಇವೇ ಮೊದಲಾದಂತಹ ಕಾರ್ಯಕ್ರಮಗಳ ಮುಖಾಂತರ ಹೊರನಾಡಿನ ಕನ್ನಡಿಗರನ್ನು ಒಗ್ಗೂಡಿಸುವಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದ್ದಾರೆ. “ನಮ್ಮ ಕನ್ನಡ” ಎಂಬ ಶೈಕ್ಷಣಿಕ ಕಾರ್ಯಕ್ರಮದ ನಿರ್ದೇಶಕರಾಗುವ ಮುಖಾಂತರ ಹೊರದೇಶದಲ್ಲೂ ಮಕ್ಕಳು ಮಾತೃಭಾಷೆಯನ್ನು ಕಲಿತು ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ತಮ್ಮ ಅಮೂಲ್ಯ ಯೋಗದಾನವನ್ನು ನೀಡಿದ್ದಾರೆ.