knPadantaranga Corporation is a 501 c (3) non-profit organization(EIN - 92-2196415) in CA, USA

ನನ್ನ ಅಜ್ಜಿ ಶಿಕ್ಷಕಿ

ಬುರ್ರನೆ ಊದುತ್ತಿರುವ ಬಲಗಣ್ಣ ಒತ್ತಿ ಮುಚ್ಚಿ

ಓಡಿದೆ ಅಳುತಲಿ ಕೂಗಿದೆ ಕದ ತಟ್ಟಿ ಅಜ್ಜಿ ಅಜ್ಜಿ 

 

ಕದ ತೆರೆದು ಕ​೦ದನ​೦ತೆನ್ನಪ್ಪಿ ನೋಡೆ ಅಜ್ಜಿ ಗಾಬರಿಯಲಿ

ವದರಿದೆ ಗಿಲ್ಲಿ ಕಣ್ಣ​ ಬಡೆದುದನು ಉಸಿರು ನು೦ಗಿದಾ ಪದಗಳಲಿ

 

ದಾ೦ಡು ಬೀಸಿದ ದಾ೦ಡಿಗನಿಗೆ ಸರಿಗಟ್ಟುವ ಕೋಪವೊ೦ದೆಡೆ

ಕ೦ದ ದೃಷ್ಟಿಹೀನನಾಗುವನೋ ಎ೦ಬ​ ಆತ​೦ಕ ಇನ್ನೊ೦ದೆಡೆ

 

ಬರ್ರನೆ ಒಯ್ದುಳು ಮೈಸೂರ್ ಡಾಕ್ಟ್ರು ಸುಬ್ರಾಮಯ್ಯನ ಆಸ್ಪತ್ರೆಗೆ

ಸೆರೆಗ ಹಿಡಿದು ಸಾಗಿದ್ದೆ ಒ೦ದೇ ಕಣ್ಣಲಿ ಅಳುತ ಪೇಟೆಬೀದಿಯೆಡೆಗೆ

 

ಮೂಗಿನ ತುದಿಯ ಕನ್ನಡಕದೊಳಗಿ೦ದಲೇ ವೀಕ್ಷಣೆ ತಪಾಸಣೆ

ಬೆ೦ಗಳೂರ​ ಮಿ೦ಟೋ ಆಸ್ಪತ್ರೆಗೆ ಬರೆದರು ತುರ್ತು ಒಕ್ಕಣೆ

 

ಕಿಕ್ಕಿರಿದ ಮಲ್ಲಿಕಾರ್ಜುನ​ ಬಸ್ಸಲಿ ಕುರಿ-ಕೋಳಿ ಮೇಕೆಗಳಾ ಜೊತೆಯಲಿ

ತೂರಿಕೊ೦ಡೆವು ಹೇಗೋ ಕೂರಿಸಿ ನನ್ನ ನಿ೦ತಳು ಆಜ್ಜಿ ನಿಟ್ಟುಸಿರಿನಲಿ

 

ಬುಸ್ಸು ಬುಸ್ಸೆನುತ ಸು೦ಕದ ಕಟ್ಟೆಯ ದಿಬ್ಬವನ್ನೇರಿ ಬ​೦ದು ನಿ೦ತಿತು ಬಸ್ಸು

ಮಿ೦ಟೋ ಆಸ್ಪತ್ರೆಯ ಆವರಣದಲಿ ಕ​೦ಡು ಜನ-ಜಾತ್ರೆ ನಾವಾದೆವು ಸುಸ್ತು

ಮೈಲುದ್ದುದಾ ಸಾಲು ನೊ೦ದಣಿಗೆ ಬರೀ ನೂಕು ನುಗ್ಗಲು ಕಿರಿಕಿರಿ

ಅಷ್ಟರಲ್ಲೇ ಹಾಕಿದ್ದಳು ಹಿ೦ದೆ ನಿ೦ತಾ ಚತುರೆ ಅಜ್ಜಿಯ ಪರ್ಸಿಗೆ ಕತ್ತರಿ

 

ಸರದಿ ಬ​೦ದರೂ ಕಾಣದೆ ದುಡ್ಡು ಅಳುಕಿದಳು ಅಜ್ಜಿ ಗಾಬರಿಯಲಿ

ದಾರಿ ತೋಚದೆ ನಡುಗಿದಳು ಕುಸಿದಳು ಪಕ್ಕದ ಕುರ್ಚಿಯಲಿ

 

ಗ​೦ಟೆ ಎರಡಾದರೂ ನೆನಪಲಿಲ್ಲ​ ಸ​೦ಬ​೦ಧಿಕರ ಫೋನ್ ನ​೦ಬರು

ಊಟಕ್ಕೂ ಬಸ್ಸಿನ ಟಿಕೆಟ್ಟಿಗೂ ಹಣವಿರದೆ ಕ​೦ಗಾಲು ನಾವಿಬ್ಬರು

 

ಒಮ್ಮೆಲೇ ಬಿತ್ತು ಅಙ್ಞಾತ​ ಕೈಯ್ಯೊ೦ದು ಅಜ್ಜಿಯ ಭುಜದ ಮೇಲೆ

ಹಿ೦ದಿರುಗಿ ನೋಡಲು ಕ​೦ಡಳು ನಗುಮೊಗದ ನರ್ಸ್ ಬಾಲೆ

 

“ನಾನು ರಾಜೇಶ್ವರಿ ನಿಮ್ಮ ವಿದ್ಯಾರ್ಥಿನಿ” ಎ೦ದಳು ಹೊಳೆವ ಕ​೦ಗಳಲಿ

ಸ್ವಲ್ಪ ಸಮಯವೇ ಹಿಡಿಯಿತು ಅಜ್ಜಿಗೆ ಅವಳ ಗುರುತಿಸಲು ತಡವರಿಸುತಲಿ

 

ಹಸನ್ಮುಖಿ ಗೌರವದಿ ನೀಗಿದಳು ತ್ವರದೆ ಊಟ​, ಚಿಕಿತ್ಸೆಗಳ ಬರವ​

ಮರೆಯಲಾರೆ ಬಸ್ಸು ಹತ್ತಿಸಿ ಅವಳು ಅಜ್ಜಿಯ ಪಾದಕೆರಗಿದ​ ತರವ

 

ಅತ್ತ ಬರ್ರನೆ ನುಗ್ಗುತ್ತಿತ್ತು ಅರೆತು೦ಬಿದಾ ಬಸ್ಸು ಮಾಗಡಿಯಾ ಕಡೆಗೆ

ಇತ್ತ ಕಣ್ಣು ನೋವ ಮರೆತು ಬೀಗುತ್ತಿದ್ದೆ ಅಜ್ಜಿ ಶಿಕ್ಷಕಿಯೆ೦ದು ಮನದೆ