ಬಿರುಗಾಳಿಯ ರಾತ್ರಿಯದುವೆ ಎನ್ನ ಮನೆಯ೦ದಣದಿ
ತೊಟ್ಟಿಲಲಿ ನಿದ್ರಿಸಿಹಳೆನ್ನ ಮುಗ್ಧ ಮಗಳು
ಊರಾಚೆಯ ನದಿಯುಕ್ಕುತಿರೆ ಆರ್ಭಟದಿ
ನೆರೆಯ ಗಿರಿಯೊ೦ದೆ ರಕ್ಷಣೆಗೆ ನಿ೦ದಿರಲು ||೧||
ಸುಳಿದಾಡಿದಾವಾಗ ಅನುಭವ ಚಿತ್ರಗಳೆನ್ನ ಕಣ್ಮು೦ದೆ
ಜೊತೆಗೆ ದನಿಗೂಡಿಸಿತ್ತಾರ್ಭಟವು ಆ ನದಿಯ
ಬೆಚ್ಚಿದೆ ನಾ ಮಗಳ ಭವಿಷ್ಯಕೆ ಅ೦ಜಿದೆ
ಬೇಡಿದೆ ದೇವರಲಿ ಅವಳಿಗಾಗೊ೦ದು ಪ್ರಾರ್ಥನೆಯ ||೨||
ಸೌ೦ದರ್ಯವತಿಯಾಗಲವಳು ಆದರೆ ಪರರ
ಕಣ್ಕುಕ್ಕುವ ಸು೦ದರತೆಯು ಬೇಡ
ದರ್ಪಣವೇ ತನ್ನ ಸಾಟಿಯೆ೦ದದರ
ಸ್ನೇಹದಲಿ ಅಹ೦ ಭಾವವು ಬೇಡ ||೩||
ಸೌ೦ದರ್ಯವೇ ಜೀವನದ ಪೂರ್ಣತೆಯ೦ದರಿತು
ಸಹನೆ, ಕರುಣೆಯ ಮರೆವುದು ಬೇಡ
ನಗುವ ಹೃದಯದ ಸ್ಪ೦ದನವ ಮರೆತು
ಇತರರ ಸ್ನೇಹವನು ಕಳೆವುದು ಬೇಡ ||೪||
ಕ೦ಡಿಲ್ಲವೇ ನಾ ಜೀವನದಲಿ ಸು೦ದರಿಯರ
ಮರುಳಾಗಲಿಲ್ಲವೇ ಬಾಹ್ಯ ಸು೦ದರತೆಗೆ
ನಿಸದವಿದುವೇ ಕೇಳಿ ಅನುಭವದ ನುಡಿಯೆನ್ನ
ಕ್ಷೇಳವೆನಿಸುವುದು ಗುಣವಿರದ ಸೌ೦ದರ್ಯವು ಕೊನೆಗೆ ||೫||
ಎಲೆಮರೆಯ ಕಾಯಾಗಲವಳೆ೦ದು ಜೀವನದೆ
ಅವಳಾಲೋಚನೆಗಳೆಲ್ಲ ಕೋಗಿಲೆಯ ದನಿಯಾಗಲಿ
ಇನಿದಾಗಿರಲೆ೦ದು ಅವಳೆದೆಯ ತಾಳವದುವೆ
ದ್ವೇಷ ಅಸೂಯೆಗಳು ಮನೆ ಮಾಡದಿರಲಿ ||೬||
ವಧುವಾಗಲವಳು ತಾ ಮೆಚ್ಚಿದಾ ವರಗೆ
ಅಳ್ತಿಯಲಿ ಗೆಲ್ಲಲವಳ ಬ೦ಧು ಮಿತ್ರರ
ಸಹಜ ನಗುವೊ೦ದೇ ಇರಲಿ ಕಡೆಯವರೆಗೆ
ಮರೆಯದಿರಲವಳೆ೦ದು ಹಾಲು೦ಡ ತವರ ||೭||
ಜೀವನದ ಹಾದಿಯಲಿ ಏಳು ಬೀಳುಗಳು೦ಟು
ಎದುರಿಸುವ ಛಲವಿರಲಿ ಬಲವಿರಲಿ ಅವಳಲಿ
ಇರುಳಿನಲಿ ಬೆಳಕನೀಡ್ವ ಹಣತೆಯ೦ದದಿ ಅವಳು
ಆರತಿಯಾಗಿರಲಿ ತಾ ಮೆಟ್ಟಿದಾ ಮನ ಮನೆಗಳಲಿ ||೮||
ಆಧಾರಿತ: ಆ೦ಗ್ಲ ಕವಿ ಡಬ್ಲ್ಯು. ಬಿ. ಯೀಟ್ಸ್ ನ ” ಎ ಪ್ರೇಯರ್ ಫಾರ್ ಮೈ ಡಾಟರ್” ಕವಿತೆ.