
ರಾಮಪ್ರಸಾದ್ ಕೆ.ವಿ
ಪರಿಚಯ
ಹಂಸಾನಂದಿ ಎಂಬ ಹೆಸರಿನಲ್ಲಿ ಸಾಮಾಜಿಕ ತಾಣಗಳಲ್ಲಿ ಬರೆಯುವ ರಾಮಪ್ರಸಾದ್ ಕೆ.ವಿ., ವೃತ್ತಿಯಲ್ಲಿ ಇಂಜಿನಿಯರ್. ಹಾಸನದಲ್ಲಿ ಹುಟ್ಟಿ ಬೆಳೆದ ಇವರು ಚಿಕ್ಕಂದಿನಿಂದ ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡರು. ೧೯೯೮ ರಿಂದ ಕ್ಯಾಲಿಫೋರ್ನಿಯಾದಲ್ಲಿ ಉದ್ಯೋಗದಲ್ಲಿದ್ದು ಅಲ್ಲಿಯ ಕನ್ನಡಿಗರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ, ಅಕ್ಕ, ಮತ್ತು ನಾವಿಕ ಸಂಸ್ಥೆಗಳ ಸಾಹಿತ್ಯ ಸಂಚಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇವರು ಬರೆದ ‘ಹಂಸನಾದ’ ಎಂಬ ಸಂಸ್ಕೃತ ಸುಭಾಷಿತಗಳ ಅನುವಾದ ಸಂಗ್ರಹ ೨೦೧೧ ರಲ್ಲಿ ಪ್ರಕಟಿತವಾಗಿದೆ. ಎಂಟನೇ ಶತಮಾನದ ಸಂಸ್ಕೃತ ಕವಿ ಅಮರುಕನ ಅಮರುಶತಕವನ್ನು ಪದ್ಯರೂಪದಲ್ಲಿ ಕನ್ನಡಕ್ಕೆ ಅನುವಾದಿಸಿದ್ದು, ಈ ಪುಸ್ತಕವು ಸಾಹಿತ್ಯ ಅಕಾಡೆಮಿಯಿಂದ ೨೦೨೧ರಲ್ಲಿ ಪ್ರಕಟವಾಗಿದೆ. ಮೂರು ಇಂಗ್ಲಿಷ್ ಪೂರ್ಣಾವಧಿ ನಾಟಕಗಳ ಕನ್ನಡ ರೂಪಾಂತರಗಳನ್ನು (ಪುಟ್ಟಮಲ್ಲಿಗೆ ಎಸ್ಟೇಟ್, ಗಾಜಿನಮನೆ, ನಂ ೩:ಪಂಚವಟಿ) ತಮ್ಮ ’ಮಂದಾರ ಕ್ರಿಯೇಶನ್ಸ್’ ಸಂಸ್ಥೆಯ ಮೂಲಕ ಕ್ಯಾಲಿಫೋರ್ನಿಯಾದ ಸ್ಯಾನ್ ಹೋಸೆಯಲ್ಲಿ ರಂಗದ ಮೇಲೆ ಯಶಸ್ವಿಯಾಗಿ ತಂದಿದ್ದಾರೆ. ಕನ್ನಡ ಕವಿಗಳ ಕಾವ್ಯಗಳನ್ನಾಧರಿಸಿ, ಮತ್ತು ತಮ್ಮದೇ ಬರವಣಿಗೆಯ ಹಲವು ಕಾವ್ಯ-ನಾಟ್ಯ ಪ್ರಸಂಗಗಳನ್ನು ರಂಗದ ಮೇಲೆ ತಂದಿದ್ದಾರೆ.
೨೦೨೫ರಲ್ಲಿ ಪ್ರಕಟವಾದ. ಸಾಂಪ್ರದಾಯಿಕ ಚೌಪದಿ ಪದ್ಯ ಶೈಲಿಯಲ್ಲಿ ಬರೆದಿರುವ ಏಳು ನೂರಕ್ಕೂ ಹೆಚ್ಚು ಚೌಪಡಿಗಳ ಪುಸ್ತಕ ‘ಮುದ್ದುರಂಗನ ಚೌಪದಿಗಳು’ ಮತ್ತೆ ಇಂಗ್ಲೀಷ್ ನಿಂದ ರೂಪಾಂತರಿತ “ಮೂರು ರೋಚಕ ನಾಟಕಗಳು” ಇವರ ಇನ್ನೆರಡು ಪುಸ್ತಕಗಳು.