ಉದ್ಯೋಗದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಸಮರ್ಥ್ ಮೂಲತಃ ಬೆಂಗಳೂರಿನವರು. ೨೦೧೩ ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾ ಗೆ ಬಂದ ಇವರು, ೨೦೧೫ರಿಂದ ಕ್ಯಾಲಿಫೋರ್ನಿಯಾ ದಲ್ಲಿ ನೆಲೆಸಿದ್ದಾರೆ. ತಮ್ಮ ಕಾಲೇಜು ದಿನಗಳಿಂದ ಓದುವ ಹಾಗು ಬರೆಯುವ ಆಸಕ್ತಿ ಹೊಂದಿದ್ದ ಸಮರ್ಥ್, ತಮ್ಮ ವಯಕ್ತಿಕ ಬ್ಲಾಗ್ ನಲ್ಲಿ ತಮ್ಮೆಲ್ಲ ಬರಹಗಳನ್ನು ದಾಖಲಿಸುತ್ತಿದ್ದರು. ಕೆ.ಎಸ್. ನರಸಿಂಹ ಸ್ವಾಮಿ, ನಿಸಾರ್ ಅಹಮದ್, ಜಿ.ಎಸ್ ಶಿವರುದ್ರಪ್ಪ ನವರ ಕವಿತೆಗಳನ್ನು ಹೆಚ್ಚು ಓದುತ್ತಿದ್ದ ಇವರಿಗೆ ಭಾವಪೂರ್ಣ ಕವಿತೆಗಳನ್ನು ಬರೆಯುವ ಆಸಕ್ತಿಯೇ ಹೆಚ್ಚಿತ್ತು. ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ೨೦೧೫ರಿಂದ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ, ಆ ಕೂಟದಿಂದ ಹೊರತರುವ “ಸ್ವರ್ಣಸೇತು” ವಾರ್ಷಿಕ ಪುರವಣಿಗೆಗೆ ಪ್ರತಿ ವರ್ಷವೂ ತಮ್ಮ ಕೈಲಾದ ಮಟ್ಟಿಗೆ ಸಂಪಾದಕೀಯ ಕಾರ್ಯಾಗಳಲ್ಲಿ ತೊಡಗಿಸಿಕೊಳ್ಳುತ್ತಾ, ಕವಿತೆಗಳ ಜೊತೆ ಲೇಖನಗಳನ್ನು ಬರೆಯುವುದಕ್ಕೆ ಪ್ರಾರಂಭಿಸಿದರು. ಅನೇಕ ವರದಿಗಳು, ಸಣ್ಣ ಸಣ್ಣ ಲೇಖನಗಳು, ಗೊತ್ತಿರುವ ವಿಷಯಗಳ ಬಗ್ಗೆ ವಿನೂತನ ದೃಷ್ಟಿಕೋನದ ಬರಹಗಳು, ಇತ್ಯಾದಿ ಹೊಸ ಸಾಹಿತ್ಯಿಕ ಚಟುವಟಿಕೆಗಳನ್ನು ಮಾಡುತ್ತಾ ಬಂದರು. ಕಿತ್ತಾಕ್ ಆನ್ಲೈನ್ ಪಾಡ್ಕ್ಯಾಸ್ಟ್ ಮೂಲಕ “ಬುಕ್ ಬುಧವಾರ” ಎಂಬ ಕಾರ್ಯಕ್ರಮದ ಮೂಲಕ ಸುಮಾರು ೧೫ ಪುಸ್ತಕಗಳ ಪರಿಚಯವನ್ನು ಸಹ ಇವರು ಮಾಡಿಕೊಟ್ಟಿದ್ದಾರೆ. ಇದರ ಜೊತೆ, ಅನಂತ್ ನಾಗ್, ಶಿವರಾಜ್ ಕುಮಾರ್, ರಾಜೇಂದ್ರ ಕಾರಂತ್, ವಾಸು ದೀಕ್ಷಿತ್, ವಾರಿಜಾಶ್ರೀ ವೇಣುಗೋಪಾಲ್, ರಾಜ್ ಶೆಟ್ಟಿ ಇತ್ಯಾದಿ ಮಹನೀಯರ ಸಂದರ್ಶನವನ್ನು ಕೂಡ ಮಾಡಿದ್ದಾರೆ. ‘ಅಕ್ಕ’ ಆನ್ಲೈನ್ ಸಮಾವೇಶ, ಇತ್ಯಾದಿ ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಕೂಡ ಮಾಡಿದ್ದಾರೆ. ಬಿಡುವಿನ ಸಮಯದಲ್ಲಿ ಚಿತ್ರಕಲೆ, ಕೊಳಲು ವಾದನ, ಛಾಯಾಚಿತ್ರಗ್ರಹಣ, ಯಕ್ಷಗಾನ, ತೋಟಗಾರಿಕೆ, ಪಾಕಶಾಸ್ತ್ರ ಇತ್ಯಾದಿ ಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.