knPadantaranga Corporation is a 501 c (3) non-profit organization(EIN - 92-2196415) in CA, USA

ಅಮ್ಮನ ರೇಶಿಮೆ ಸೀರೆ

ಡಾ. ಮೀನಾ ಸುಬ್ಬರಾವ್, ಸಲೀನಾಸ್, ಕ್ಯಾಲಿಫೋರ್ನಿಯ.

ಅಮ್ಮನ ರೇಶಿಮೆ ಸೀರೆ, ಇರಲಿಲ್ಲ ಬಹಳ
ಅದರಲ್ಲೊಂದಿತ್ತು ಬಹಳ ವಿರಳ
ಅಂಚಿನಲ್ಲಿತ್ತು ಝರತಾರಿ ಹೂವುಗಳ ಆವಳಿ
ಅಂದದ ಒಡಲಿನಲ್ಲಿತ್ತು ಬಣ್ಣ ಬಣ್ಣದ ಚೌಕಳಿ

ಸರಳ ಚೆಂದದ ಸೆರಗು
ಸೇರಿಸಿ ಕೊಟ್ಚಿತು ಮೆರಗು
ಸಾರಿ ಸಾರಿ ಉಟ್ಟರೂ ತರಲಿಲ್ಲ ಕೊರಗು
ಸರಸ್ವತಿ, ಹೊನ್ನಿನ ಬಣ್ಣದ ಮಿನುಗು

ಉಟ್ಟಳು ಅಮ್ಮ ಮೇಲಿಂದಮೇಲಿದನು
ತೊಟ್ಟಳು ಅದಕೆ ಹೊಂದುವ ಕೆಂಪಿನ ಓಲೆಯನು
ಮುಡಿದಳು ಮುಡಿಯಲಿ ದುಂಡುಮಲ್ಲಿಗೆಯ ದಂಡೆಯನು
ನಡೆದಾಡಿದಳು ಉತ್ಸಾಹದಿ ಮೆರೆಯುತ್ತಾ ಪಾರವಿಲ್ಲದ ಚೆಲುವನು

ಕಡೆಗೊಂದು ದಿನ ಪಾತ್ರೆ-ಪರಟಿಯವನು
ಕೇಳಿಯೇ ಬಿಟ್ಟನು ಹಳೆೇ ರೇಶಿಮೆ ಸೀರೆಯನು
ಕಡ್ಡಾಯಹಾಕಿದನು ಒಲ್ಲೆ ಬೇರೆ ಸೀರೆಯನು
ಕೊಟ್ಟರೆ ಕೊಡಿ ಈ ಝರತಾರಿ ರೇಶಿಮೆ ಸೀರೆಯನು

ಹಿಂದೆ- ಮುಂದೆ ನೋಡದೆ ಅಮ್ಮನೆಂದಳು
ಕಂದಮ್ಮಗಳಿಗಾದೀತು ಲಂಗ – ಕುಪ್ಪಸಗಳು
ಮುಂದೆರಡು – ಮೂರು ವರುಷಗಳುರುಳಲಿ
ಬಂದು ನೋಡಾಗ ಗಿಟ್ಟೀತು ಬಳುವಳಿ