ಒಲಿದೆ ನೀನು ಒಂದು ಕ್ಷಣಕೆ ನನ್ನ ಬಾಳ ಪಥದಲಿ
ನಡೆದೆ ನಾನು ಅದರ ಮೇಲೆ ನನ್ನ ಬಾಳ ರಥದಲಿ!
ಸವಿನೆನಪು ಸಾಕೊಂದು ಬಾಳಿನಾ ಅರ್ಥಕೆ
ಸವಿಯುತಿರೆ ಸಾಗಿಹುದು ಬದುಕಿನಾ ಪತಾಕೆ!
ಆ ಮಧುರ ಅನುಭವವು ಅಮರವಾಗಿದೆ ಮನಕೆ
ಆ ಅಧರ ಅದರುವಿಕೆ ಅರಸುತಿದೆ ಜೀವಕೆ!
ಬರದಿರಳು ನಿದಿರೆಯು ನಿನ್ನಂದ ನೆನೆಯದೆ
ಹಗಲಿರುಳು ಸಾಗದು ಮಕರಂದ ಸವಿಯದೆ!
ಎಲ್ಲಿ ನೋಡಿದರಲ್ಲಿ ನೀ ನನ್ನ ನೋಟವಾಗಿರುವೆ
ಏನು ಮಾಡಿದರೂ ನೀ ನನ್ನ ಆಟವಾಗಿರುವೆ!
ನೀ ನಡೆಸುತಿರುವೆ ಬದುಕನು ಬರಡಾಗಿಸದೆ
ನೀ ಬಡಿಸುತಿರುವೆ ಅರಿವನು ಬರಿದಾಗಿಸದೆ!
ಮತ್ತೊಮ್ಮೆ ಬಾ ನೀನು ಭವ್ಯ ಭಾವಗಳ ಹೊತ್ತು
ಇನ್ನೊಮ್ಮೆ ಕೊಡು ನೀನು ದಿವ್ಯ ಅನುರಾಗದ ತುತ್ತು!
ನಗುತಿರು ಎಂದೆಂದೂ, ಬರಲಿ ಏನೊಂದು
ಸ್ಮರಿಸುತಿರು ಎಂದೆಂದೂ, ಬರುವೆ ನಾನಂದು
ನುಡಿದೆ ದಿವ್ಯ ವಾಣಿಯ ನನ್ನ ಮನದಾಳದಿ ನೀನಂದು!!