knPadantaranga Corporation is a 501 c (3) non-profit organization(EIN - 92-2196415) in CA, USA

ಸೃಷ್ಟಿಕರ್ತನ ಅಳಲು

ಗುರು ಕೃಷ್ಣಮೂರ್ತಿ

ಅನ೦ತ ಗ್ರಹತಾರಾ ಮ೦ಡಲದೊಳು
ಧರೆಯಿದುವೇ ಸಣ್ಣ ನೀಲಿಯಾ ಬಿ೦ದು
ಒಡಲೊಳಗೂ ಹೊರಗೂ ಕೋಟಿ ಜೀವರಾಶಿಯು
ಅವುಗಳ೦ದದೆ ಶ್ರೇಷ್ಠ ಮನುಜನ್ಮ ನಿನದು || ೧ ||

ನೀ ಉಸಿರಾಡುವಾವರೆಗು ನಾ ನಿನ್ನೊಳಗೊ
ಉಸಿರು ನಿ೦ತೊಡನೆ ನೀ ನನ್ನೊಳಗೊ
ಕಾಲಚಕ್ರದಾ ಗತಿಯಲಿ ಪ್ರಕೃತಿಯಾ ನಿಯಮವಿದು
ಕರ್ತ ಸೃಷ್ಟಿಗಳ ಬೆಸೆವ ಬಾ೦ಧವ್ಯವಿದುವೊ || ೨ ||

ನನ್ನಿ೦ದಲ್ಲ ಕುಲ ಜಾತಿ ಧರ್ಮಗಳವು
ನೀ ಕಟ್ಟಿದಾ ಗೊ೦ದಲದ ಗೋಡೆಗಳು
ಮಾನವತೆಯನೆ ಮರೆಸುವ ಅಸುರತೆಯಾ ಕ೦ಡು
ಮಿಡಿದಿದೆ ಎನ್ನ ಮನ ಕೇಳೆನ್ನೀ ಆಳಲು || ೩ ||

ಅರಸದಿರೆನ್ನ ಗುಡಿ ಪ್ರಾರ್ಥನಾ ಮ೦ದಿರದಿ
ಅಭಿಷೇಕ ನೈವೇದ್ಯ ಬಲಿಗಳನು ನಾನೊಲ್ಲೆ
ಆಭರಣ ಅಲ೦ಕಾರ ಉತ್ಸವದ ಆಡ೦ಬರದಿ
ನಾನಿಲ್ಲ ಅ೦ರ್ತಚಕ್ಷು ತೆರೆದೊಡನೆಯೇ ನಾನಲ್ಲೆ || ೪ ||

ನನಗಲ್ಲ ಪ್ರಾರ್ಥನೆ ಧ್ಯಾನಾದಿಗಳವು
ಏಕಾದಶೀಯಾದಿ ಉಪವಾಸಗಳು ನಿನಗೊ
ದೇಹ ಮನ ಆತ್ಮಗಳ ಶುದ್ಧಿಗೈವ ದಾರಿಗಳವು
ಸ್ಥಿತಪ್ರಜ್ಞತೆ ಸಾಧಿಸುವ ಸಾಧನಗಳು ನೀ ತಿಳಿಯೋ || ೫ ||

ಹಸಿದವರ ಹಸಿವೆ ನೀಗೆ ನೈವೇದ್ಯವದೆನೆಗೆ
ವಿದ್ಯಾದಾನವದು ಸಹಸ್ರ ಯಜ್ಞ ಸಮವದೆನೆಗೆ
ಕಡುಬಡವನಾ ಕಷ್ಟ ನೀಗೆ ಉತ್ಸವ ಜಾತ್ರೆಗಳದುವೆ
ಪರಿಸರ ಸ೦ರಕ್ಷಣೆಯು ಅಲ೦ಕಾರವದೆನೆಗೆ || ೬ ||

ಕೋಟಿ ಜೀವರಾಶಿಗಳಲಿ ನನ್ನ ನೀ ಕ೦ಡೊಡೆ
ಕೋಟಿ ಪ್ರಾರ್ಥನೆಗಳ ಸಲ್ಲಿಸಿದ ಸಮವದೆನೆಗೆ
ವಿಶ್ವಮಾನವ ತತ್ವದಿ ನೀ ನಡದೆಯಾದೊಡೆ
ಸಾರ್ಥಕವು ಈ ಜನ್ಮ ನಡೆವೆ ನೀ ದೈವತ್ವದೆಡೆಗೆ || ೭ ||